ವೀರಭದ್ರ
	ಶಿವನ ಮಗ. ದಕ್ಷಯಾಗ ಧ್ವಂಸಿ ಮತ್ತು ರುದ್ರಾಂಶ ಸಂಭೂತ. ವೀರಶೈವರ ಆರಾಧ್ಯ ದೇವತೆ. ಇವನ ವಿಚಾರ ಶಿವಪುರಾಣ-ವಾಯವೀ ಸಂಹಿತೆ, ಲಿಂಗಪುರಾಣ, ಮಹಾಭಾರತ, ಭಾಗವತ ಮೊದಲಾದ ಕೃತಿಗಳಲ್ಲಿ ಬಂದಿದೆ. ಇವನಿಗೆ ನಾಲ್ಕು, ಎಂಟು ಹಾಗೂ ಮೂವತ್ತೆರಡು ಕೈಗಳಿದ್ದುವೆಂದು ಪುರಾಣಗಳಲ್ಲಿ ಹೇಳಲಾಗಿದೆ. ಈತನ ಹೆಂಡತಿ ಭದ್ರಕಾಳಿ. ಈತ ಈಶ್ವರನ ಹನ್ನೆರಡನೆಯ ಲೀಲಾವತಾರವೆಂದು ವೀರಶೈವ ಕವಿಗಳು ಬಣ್ಣಿಸಿದ್ದಾರೆ. ಸಾಮಾನ್ಯವಾಗಿ ವೀರಶೈವ ಕವಿಗಳು ತಮ್ಮ ಗ್ರಂಥಾದಿಯಲ್ಲಿ ಇವನನ್ನು ಸ್ಮರಿಸುವ ಪರಿಪಾಠವಿದೆ. ಈತ ವೀರಶೈವರ ಪ್ರಾಚೀನ ಮೂಲಪುರುಷ ಎನಿಸಿದ್ದಾನೆ. ಜಾತ್ರೆ ಕಾಲದಲ್ಲಿ ಈತನ ದೇವಾಲಯಗಳಲ್ಲಿ ಅಗ್ನಿಕುಂಡ ಹಾಯುತ್ತಾರೆ.

	ವೀರಭದ್ರನ ಅವತಾರದ ಬಗ್ಗೆ ಪುರಾಣಗಳ ಹೇಳಿಕೆ ಹೀಗಿದೆ : ದಕ್ಷ ತನ್ನ ಹೆಣ್ಣು ಮಕ್ಕಳಲ್ಲಿ ಸತೀದೇವಿ ಎಂಬಾಕೆಯನ್ನು ಶಿವನಿಗೆ ಮದುವೆ ಮಾಡಿಕೊಟ್ಟಿದ್ದ. ದೇವಸಭೆಯಲ್ಲಿ ತನಗೆ ಅವಮಾನವಾಯಿ ತೆಂಬ ಆಗ್ರಹದಿಂದ ದಕ್ಷ ಶಿವನನ್ನು ಅಲಕ್ಷ್ಯ ಮಾಡಿ ನಿರೀಶ್ವರಯಾಗ ಮಾಡತೊಡಗಿದ. ಈ ಯಾಗಕ್ಕೆ ತನಗೆ ಆಮಂತ್ರಣವಿಲ್ಲದಿದ್ದರೂ ಯಾಗ ಶಾಲೆಗೆ ಹೋದ ಸತಿ ಅಲ್ಲಿ ಅಪಮಾನ, ತಿರಸ್ಕಾರಗಳಿಗೆ ಗುರಿಯಾಗಿ ಯೋಗಾಗ್ನಿಯಲ್ಲಿ ದೇಹತ್ಯಾಗ ಮಾಡಿದಳು. ಶಿವ ಈ ಸಮಾಚಾರವನ್ನು ನಾರದನಿಂದ ತಿಳಿದು ಕ್ರೋಧಾಂಧನಾಗಿ ತನ್ನ ಜಟಾಜೂಟದಿಂದ ಒಂದು ಹಿಡಿ ಕೂದಲನ್ನು ಕಿತ್ತು ನೆಲದ ಮೇಲೆ ಎಸೆದ. ಕೂಡಲೆ ಭಯಂಕರ ರೂಪಿನ ಕರಾಳ ಪುರುಷನೊಬ್ಬ ಹೊರಬಂದ. ಇವನೇ ವೀರಭದ್ರ. ಶಿವನ ಅಪ್ಪಣೆ ಪಡೆದ ಈತ ಒಡನೆಯೇ ಪರಿವಾರದೊಂದಿಗೆ ಹೊರಟು ದಕ್ಷನ ಯಾಗಶಾಲೆಯನ್ನು ನಾಶಮಾಡಿ ದಕ್ಷನ ತಲೆಯನ್ನು ಕತ್ತರಿಸಿ ಯಜ್ಞಕುಂಡದಲ್ಲಿ ಎಸೆದ. ದೇವತೆಗಳ ಪ್ರಾರ್ಥನೆಯ ಮೇರೆಗೆ ಶಿವ ಒಂದು ಟಗರಿನ ತಲೆಯನ್ನು ತರಿಸಿ ದಕ್ಷನ ಮುಂಡಕ್ಕೆ ಜೋಡಿಸಿ ಅವನನ್ನು ಬದುಕಿಸಿದ. ರಾಘವಾಂಕ, ಹರಿಹರ ಮುಂತಾದವರು ವೀರಭದ್ರನನ್ನು ಕುರಿತು ಕಾವ್ಯಗಳನ್ನು ಬರೆದಿದ್ದಾರೆ.					
		(ಬಿ.ಎಸ್.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ